ಇದು ಕೋರ್ಟಿಗೆ ಇರುವ ತಾಕತ್ತು.

ಕೋರ್ಟಿನಲ್ಲಿ ಪ್ರಧಾನಿಯವರು ಮೇಲೆ ಕೂರಬೇಕಾ ಹೈಕೋರ್ಟ್ ಜಜ್ ರವರು ಮೇಲೆ ಕೂರಬೇಕಾ ?ಕಾನೂನಿನ ಎದುರು ಎಲ್ಲರೂ ಸಮಾನರು ಅಂತ ಸಂವಿಧಾನದ 14 ನೇ ವಿಧಿ ಹೇಳುತ್ತದೆ . ಆದರೆ ಒಂದು ಕೋರ್ಟ್ ನಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿಯವರೇ ಸಾಕ್ಷಿ ಹೇಳಲು ಕಟಕಟೆಯನ್ನು ಪ್ರವೇಶಿಸಿದರೆ ? ಜಜ್ ಎದ್ದು ನಿಂತು ಗೌರವ ಸೂಚಿಸಬೇಕಾ ? ಅಥವಾ ಇತರ ಸಾಮಾನ್ಯರಂತೇ ಅವರನ್ನು ಕೇವಲ ಒಬ್ಬ ಪ್ರಜೆಯಂತೇ ನಡೆಸಿಕೊಳ್ಳಬೇಕಾ ? ಹಾಗೆ ನಡೆಸಿಕೊಂಡರೆ ಪ್ರಧಾನಿ ಹುದ್ದೆಯ ಗೌರವ ಏನು ಉಳಿಯುತು? ಸ್ವತಃ ಜಜ್ ಎದ್ದು ನಿಂತು ಗೌರವ ಸೂಚಿಸಿದರೆ ಸಂವಿಧಾನದ ಉಲ್ಲಂಘನೆ ಆಗಲಿಲ್ಲವೇ ? ಪ್ರಧಾನಿ ಆಸನ ಜಜ್ ಗಿಂತ ಎತ್ತರದಲ್ಲಿರಬೇಕೇ , ಕೆಳಗಿರಬೇಕೇ ?ಇವೆಲ್ಲ ಪ್ರಶ್ನೆಗಳು ಭಾರತದ ಇತಿಹಾಸದಲ್ಲಿ ಇದುವರೆಗೆ ಒಮ್ಮೆ ಮಾತ್ರ ನಡೆದಿವೆ . ಶ್ರೀಮತಿ ಇಂದಿರಾ ಗಾಂಧಿ ಕಾಲದಲ್ಲಿ, ಅಲಹಾಬಾದ್ ಹೈಕೋರ್ಟ್ ನಲ್ಲಿ.ಇಂದಿರಾ ಗಾಂಧಿ ವಿರುದ್ಧ ರಾಜ್ ನಾರಾಯಣ್ ಕೇಸು . 1975 . ನ್ಯಾಯಾಲಯಕ್ಕೆ ಸಾಕ್ಷಿ ಆಗಿ ಹೋಗಬೇಡಿ ಅಂತ ಆಪ್ತೇಷ್ಟರು ಕೊಟ್ಟ ಸಲಹೆಯನ್ನು ಧಿಕ್ಕರಿಸಿ ಇಂದಿರೆ ನ್ಯಾಯಾಲಯದ ಕಟಕಟೆಯನ್ನು ಪ್ರವೇಶಿಸಿಯೇ ಬಿಟ್ಟರು . ಇದು ಮುಂದೆ ಭಾರತದ ಇತಿಹಾಸವನ್ನೇ ಬದಲಿಸಿತು . ತುರ್ತು ಪರಿಸ್ಥಿತಿ , ಸಂವಿಧಾನದ ತಿದ್ದುಪಡಿ , ಬಿಜೆಪಿ ಪಕ್ಷದ ಹುಟ್ಟು ಸೇರಿ ಇಂದು ನರೇಂದ್ರ ಮೋದಿಯವರು ಪ್ರಧಾನಿ ಆಗಲು ಶಂಕುಸ್ಥಾಪನೆ ಮಾಡಿದ್ದು ಇದೇ ನಡೆ .

ಇದೆಲ್ಲ ಶುರುವಾಗಿದ್ದು ರಾಜ್ ನಾರಾಯಣ್ ಎಂಬ ವ್ಯಕ್ತಿಯಿಂದ. ರಾಯ್ ಬರೇಲಿಯಲ್ಲಿ ಇಂದಿರಾ ಗಾಂಧಿ ವಿರುದ್ಧ ಚುನಾವಣೆಯಲ್ಲಿ ಸ್ಟರ್ಧಾಸಿದ್ದ ರಾಜ್ ನಾರಾಯಣ್ ಇಂದಿನ ಇ ವಿ ಎಂ ಹ್ಯಾಕ್ ತರದ ಒಂದು ಆಪಾದನೆಯನ್ನು ಹಿಡಿದುಕೊಂಡು ನ್ಯಾಯವಾದಿ ಶಾಂತಿ ಭೂಷಣ್ ರವರ ಆಫೀಸಿನ ಕದ ತಟ್ಟಿದರು . ರಾಜ್ ನಾರಾಯಣ್ ಚಿತ್ರ ವಿಚಿತ್ರ ಉಡುಗೆ ತೊಡುಗೆಯ ಜೋಕರ್ ತರದ ಮನುಷ್ಯ.ರಾಜ್ ನಾರಾಯಣ್ ಹೇಳುವ ಪ್ರಕಾರ ಕಾಂಗ್ರೆಸ್ ಪಕ್ಷವು ಚೈನಾದಿಂದ ಒಂದು ಇನ್ವಿಸಿಬಲ್ ಜಾದೂ ಇಂಕನ್ನು ತರಿಸಿದೆ. ಈ ಜಾದೂ ಮಸಿಯಿಂದ ನೀವು ಬ್ಯಾಲೆಟ್ ಪೇಪರ್ ಮೇಲೆ ಯಾವುದೇ ಪಕ್ಷಕ್ಕೆ ಓಟು ಹಾಕಿದರೂ ಒಂದು ಗಂಟೆ ಕಳೆದ ಬಳಿಕ ಮಸಿ ಹಾರಿ ಹೋಗಿ ಕಾಂಗ್ರೆಸ್ ಚಿನ್ಹೆ ಇರುವ ಜಾಗದಲ್ಲಿ ನಿಮ್ಮ ವೋಟಿನ ಗುರುತು ಮೂಡಿ ಬರುತ್ತದೆ ಅಂತ.ಶಾಂತಿ ಭೂಷಣ್ ಇದನ್ನು ಕೇಳಿ ” ಇಂಥದ್ದಕ್ಕೆಲ್ಲಾ ಕೇಸು ಹಾಕಲು ಸಾಧ್ಯವಿಲ್ಲ” ಅಂತ ನಕ್ಕರು. ರಾಜ್ ನಾರಾಯಣ್ ಇನ್ನೇನು ಹೊರಗೆ ಹೋಗಬೇಕು ಅನ್ನುವಾಗ ಅವರು ಹೇಳಿದ ಒಂದು ಮಾತು ಶಾಂತಿ ಭೂಷಣ್ ರವರನ್ನು ಸೀಟಿನ ತುದಿಗೆ ಕುಳ್ಳರಿಸಿತು. ಇಂದಿರಾ ಗಾಂಧಿ ಚುನಾವಣಾ ಪ್ರಚಾರಕ್ಕೆ ಬಂದಾಗ ರಾಯ್ ಬರೇಲಿಯ ಅಸಿಸ್ಟೆಂಟ್ ಕಮಿಷನರ್, ಡಿಸ್ಟ್ರಿಕ್ಟ್ ಕಮಿಷನರ್ ಇತ್ಯಾದಿ ಜನರೆಲ್ಲರೂ ಕುರ್ಚಿ ಹಾಕುವುದರಿಂದ ಹಿಡಿದು ಮೈಕ್ ಎರೇಂಜ್ಮೆಂಟ್ ತನಕ ಎಲ್ಲಾ ಮಾಡುತ್ತಾರೆ ಅನ್ನೋದು. ಸರಕಾರಿ ಯಂತ್ರವನ್ನು ಒಂದು ಅಭ್ಯರ್ಥಿಯ ಪರ ಪ್ರಚಾರಕ್ಕೆ ಬಳಸಿಕೊಳ್ಳುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿತ್ತು.ಶಾಂತಿ ಭೂಷಣ್ ಇಂದಿರಾ ಗಾಂಧಿಗೆ ನೋಟೀಸ್ ಜಾರಿ ಮಾಡಿದರು . ಸ್ವತಃ ಪ್ರಧಾನಿ, ಅದೂ ಇಂದಿರಾ ಗಾಂಧಿ ಕೋರ್ಟ್ ಕಟಕಟೆಯಲ್ಲಿ ನಾಳೆ ನಿಲ್ಲಲಿದ್ದಾರೆ ಅನ್ನುವ ಸಂದೇಶ ಕೋರ್ಟಿಗೆ ಬಂದಾಗ ಕೋರ್ಟ್ ತಲ್ಲಣಿಸಿ ಹೋಯಿತು.ಪ್ರಧಾನಿಯವರಿಗೆ ಎಲ್ಲರಂತೇ ಕಾಯಿಸಬೇಕೇ ? ನಿಲ್ಲಿಸಬೇಕೇ , ಕೂರಿಸಬೇಕೇ ? ಕೂರಿಸೋದೇ ಆದರೆ ಅವರ ಸೀಟು ಜಜ್ ಸೀಟ್ ಗಿಂತ ಎತ್ತರದಲ್ಲಿರಬೇಕೇ ಕೆಳಗಿರಬೇಕೇ ? ಎಂಬೆಲ್ಲ ಪ್ರಶ್ನೆಗಳು ಸ್ವತಃ ಕೋರ್ಟಿಗೇ ಎದುರಾದವು . ಇವುಗಳಿಗೆ ಉತ್ತರ ಭಾರತದ ಯಾವುದೇ ಕಾನೂನು ಪುಸ್ತಕದಲ್ಲಿ ಇಲ್ಲ.ಕೊನೆಗೆ ಜಜ್ ಇಂದಿರಾಗಾಂಧಿಯವರ ವಕೀಲ ನಾನಿ ಪಾಲ್ಖಿವಾಲಾ ಹಾಗೂ ವಿರುದ್ಧ ವಕೀಲ ಶಾಂತಿ ಭೂಷಣ್ ರವರನ್ನೇ ಸಲಹೆ ಕೇಳಿ , ಏನೋ ಒಂದು ನಿರ್ಧಾರಕ್ಕೆ ಬಂದರು.ಪ್ರಧಾನಿ ಬಂದಾಗ ಯಾರೂ ಎದ್ದು ನಿಲ್ಲಬಾರದು ಅಂತ ವಕೀಲರಿಗೆ ಮೊದಲನೇ ದಿನವೇ ಸೂಚನೆ ನೀಡಲಾಗಿತ್ತು. ಆದರೆ ಮಾರನೇ ದಿನ ಇಂದಿರಾಗಾಂಧಿ ಒಳಗೆ ಬಂದಾಗ ಹೆಚ್ಚಿನ ವಕೀಲರು ತಮಗೇ ಗೊತ್ತಿಲ್ಲದೇ ಎದ್ದು ನಿಂತು ಗೌರವ ಸೂಚಿಸಿದರು ಅಂತ ವಕೀಲ ಶಾಂತಿ ಭೂಷಣ್ ಮಗ ಪ್ರಶಾಂತ್ ಭೂಷಣ್ ತಮ್ಮ ನೆನಪಿನ ಬುತ್ತಿಯಿಂದ ಬರೆದ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಪ್ರಶಾಂತ್ ಭೂಷಣ್ ಇಂದು ಖ್ಯಾತ ಸುಪ್ರೀಂಕೋರ್ಟ್ ನ್ಯಾಯವಾದಿ. ಆದರೆ ಅಂದು ಕೇವಲ ಒಬ್ಬ ಕಾನೂನು ವಿದ್ಯಾರ್ಥಿಯಾಗಿ ಕುತೂಹಲದಿಂದ ಅಲಹಾಬಾದ್ ಹೈಕೋರ್ಟ್ ನಲ್ಲಿ ಇದ್ದರು .ಇವರು ತಮ್ಮ ಪುಸ್ತಕದಲ್ಲಿ ಬರೀತಾರೆ – ಮೊದಲನೇ ದಿನ ಶಾಂತಿ ಭೂಷಣ್ , ಇಂದಿರಾ ಗಾಂಧಿಗೆ ನಿಮ್ಮ ಹೆಸರೇನು ? ನೀವು ಭಾರತದ ಪ್ರಧಾನಿಯೇ ತರೆದ ಅತ್ಯಂತ ಸುಲಭವಾದ ಪ್ರಶ್ನೆಗಳನ್ನು ಕೇಳಿದರು . ಸಹವಕೀಲರು ಕೋರ್ಟ್ ಕಲಾಪದ ನಂತರ ಇವೆಂಥ ಪ್ರಶ್ನೆಗಳನ್ನು ಕೇಳುವ ಅವಶ್ಯಕತೆ ಇತ್ತಾ ? ಅಂತ ಕೇಳಿದರಂತೆ . ಆಗ ಶಾಂತಿ ಭೂಷಣ್ “ಪಿಚ್ಚರ್ ಅಭೀ ಬಾಕೀ ಹೈ , ನಾಳೆ ನೋಡಿ” ಅಂದರಂತೆ.ಮಾರನೇ ದಿನ ತೊಂಬತ್ತು ನಿಮಿಷ ಪಾಟೀಸವಾಲು ನಡೆಯಿತು. ಇಂದಿರಾ ಗಾಂಧಿ ತಮ್ಮ ಅತೀವವಾದ ಆತ್ಮವಿಶ್ವಾಸದಿಂದ ತಪ್ಪು ಉತ್ತರ ಕೊಟ್ಟೇ ಬಿಟ್ಟಿದ್ದರು .ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಚುನಾವಣಾ ಗೆಲುವನ್ನೇ ಅಮಾನ್ಯ ಮಾಡಿತು . ಇದು ಇಡೀ ದೇಶದಲ್ಲಿ ಭೂಕಂಪವನ್ನೇ ಸೃಷ್ಟಿಸಿತು .ಶಾಂತಿ ಭೂಷಣ್ ನಂತರ ಬರೀತಾರೆ – ಜಜ್ಮೆಂಟ್ ಬಂದಾಗ ನಾನು ಅಲಹಾಬಾದಿನಲ್ಲಿ ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ ಇಂದಿರಾಗಾಂಧಿ ತಡೆಯಾಜ್ಞೆ ತರದೇ ಇರುವಂತೆ, ಜೈಲಿಗೆ ಹೋಗುವಂತೆ ನೋಡಿಕೊಳ್ಳುತ್ತಿದ್ದೆ. ಆದರೆ ನಾನು ಇರದೇ ಇದ್ದಿದ್ದರಿಂದ ಆಕೆಗೆ ಮೂರು ದಿನ ಸಮಯಾವಕಾಶ ಸಿಕ್ಕು , ಆಕೆ ತಡೆಯಾಜ್ಞೆ ತಂದು , ತದನಂತರ ತುರ್ತುಪರಿಸ್ಥಿತಿ ಘೋಷಣೆ ಮಾಡುವಂತೆ ಆಯಿತು” ಅಂತ.ಇದು ಕೋರ್ಟಿಗೆ ಇರುವ ತಾಕತ್ತು. ಒಬ್ಬ ವಕೀಲ ಪ್ರಧಾನಿಗಿಂತಲೂ ಪವರ್ ಫುಲ್ ಅನ್ನೋ ಸಂವಿಧಾನ ದತ್ತ ಪವರ್.
ಲೇಖಕರು: ಮನೋಜ ಪಂಡಿತ



