ಉತ್ತರವಿಲ್ಲದೆ ತತ್ತರಿಸುತ್ತಿರುವ ಉತ್ತರ ಕನ್ನಡ!

ಉತ್ತರ ಕನ್ನಡ ಅಂದ ತಕ್ಷಣ ಸಾಮಾನ್ಯವಾಗಿ ಜನರ ತಲೆಗೆ ಥಟ್ ಅಂತ ಬರೋದು ಉತ್ತರ ಕರ್ನಾಟಕ ಎಂದು. ಆದರೆ ಉತ್ತರ ಕರ್ನಾಟಕಕ್ಕೂ ಉತ್ತರ ಕನ್ನಡಕ್ಕೂ ಎಷ್ಟು ವ್ಯತ್ಯಾಸವಿದೆ ಗೊತ್ತೇ? ಉತ್ತರಕರ್ನಾಟಕ ಅಂದರೆ ಅದೊಂದು ಶುಷ್ಕ ವಾತಾವರಣವನ್ನು ಹೊಂದಿರುವ ಅಪ್ಪಟ ಬಯಲುಸೀಮೆ ಪ್ರದೇಶವುಳ್ಳ ಕರ್ನಾಟಕದ ಒಂದು ಜಿಲ್ಲೆ. ಅದೇ ಉತ್ತರ ಕನ್ನಡ ಅಂದ್ರೆ ಉತ್ತರ ಕರ್ನಾಟಕಕ್ಕೆ ತದ್ವಿರುದ್ಧವಾದ ವಾತಾವರಣವನ್ನು ಹೊಂದಿರುವ ಮಲೆನಾಡು ಹಾಗೂ ಕರಾವಳಿ ಭಾಗಗಳನ್ನು ಹೊಂದಿರುವ, ಕನ್ನಡಿಗರ ತಾಯಿ ಭುವನೇಶ್ವರಿ ನೆಲೆಸಿರುವ ಜಿಲ್ಲೆ ಕಾರವಾರ ಜಿಲ್ಲೆ ಇದನ್ನ ಉತ್ತರ ಕನ್ನಡ ಎಂದು ಕರೆಯಲಾಗತ್ತೆ ಆದರೆ, ಯಾಕೆ ಜನರಿಗೆ ಈ ಎರಡು ಜಿಲ್ಲೆಗಳ ಬಗ್ಗೆ ಗೊಂದಲಿವಿದೆ..? ಹಾಗಾದರೆ ತಮ್ಮದೇ ರಾಜ್ಯದಲ್ಲಿರುವ ಎರಡು ವಿಭಿನ್ನ ರೀತಿ ಹೊಂದಿರುವ ಜಿಲ್ಲೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾಗಿದ್ದಕ್ಕೆ ಕಾರಣವಾದರು ಏನು? ಅತಿ ಹೆಚ್ಚು ಅರಣ್ಯ ಪ್ರದೇಶಗಳು, ಅತಿ ಹೆಚ್ಚು ಜಲಪಾತಗಳು ಹಾಗೂ ಅತಿ ಹೆಚ್ಚು ಕಡಲ ತೀರಗಳನ್ನ ಹೊಂದಿದ್ದು ಅತಿಯಾದ ಸೌಂದರ್ಯ ಇದ್ದರೂ ಕೂಡ ಹೆಸರಾಗದೆ ಇದ್ದದ್ದು ಇದಕ್ಕೆ ಕಾರಣವೆ? ಅಥವಾ ಸರಕಾರದಿಂದ ಏನನ್ನು ಅತಿಯಾಗಿ ನಿರೀಕ್ಷಿಸದೆ, ಅಧಿಕಾರಿಗಳಿಗೆ ಏರು ಧ್ವನಿಯಲ್ಲಿ ಪ್ರಶ್ನಿಸದೆ, ಮೀನುಗಾರಿಕೆಯಿಂದ, ಅರಣ್ಯ ಸಂಪನ್ಮೂಲದಿAದ ತನ್ನಷ್ಟಕ್ಕೆ ತಾನೇ ಸರ್ಕಾರದ ಬೊಕ್ಕಸ ತುಂಬುತ್ತಿರುವುದು ಮುಳುವಾಯಿತೆ..? ಈ ಎಲ್ಲಾ ಪ್ರಶ್ನೆಗಳಿಗೂ ಒಂದೇ ಒಂದು ಸ್ಪಷ್ಟನೆ ಕಂಡುಕೊಳ್ಳುವುದಾದರೆ, ಉತ್ತರ ಕನ್ನಡ ಅಂದರೆ ಕಾರವಾರ ಜೆಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವ ಜಿಲ್ಲೆ.. ಹೌದು, ಇಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲಾ, ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲಾ. ಜಿಲ್ಲೆಯಲ್ಲಿರುವ ತಾಲೂಕು ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲಾ. ಇನ್ನೂ ಅಲ್ಲಿನ ಸರ್ಕಾರೀ ಸಾರಿಗೆ ವ್ಯವಸ್ಥೆಯ ಕಥೆಯನ್ನು ಹೇಳುತ್ತಾ ಹೊರಟರೆ ಅದಂತೂ ತುಂಬಾ ಪುರಾತನ ಎನಿಸಿಕೊಳ್ಳುತ್ತದೆ. ಹೌದು. ಅಲ್ಲಿನ ಸರ್ಕಾರಿ ಬಸ್ ಗಳು ಹತ್ತು ವರ್ಷಗಳ ಹಿಂದಿನ ಬಸ್ ಗಳೇ ಇಂದಿಗೂ ಓಡಾಡುತ್ತಿವೆ. ಇಂದಿಗೂ ಕಾರವಾರ, ಭಟ್ಕಳ, ಸಿರಸಿ, ಕುಮುಟಾ, ಸಿದ್ದಾಪುರದಿಂದ 600ರಿಂದ 500 ಕಿಲೋಮೀಟರ್ ದೂರವಿರುವ ಬೆಂಗಳೂರಿಗೆ ಓಡಾಡುವ ಬಸ್‌ಗಳು ಕೂಡ ಅದೇ ಹತ್ತು ವರ್ಷಗಳ ಹಳೆಯ ಬಸ್‌ಗಳೇ. ಪ್ರಯಾಣಿಕರನ್ನು ಹೊತ್ತು ಸಾಗುವಾಗ ಮಾರ್ಗ ಮಧ್ಯದ ಅರಣ್ಯ ಪ್ರದೇಶದಲ್ಲಿ ಕೆಟ್ಟು ನಿಲ್ಲುವ ಬಸ್ಸುಗಳೆಷ್ಟೋ? ಜೋರು ಮಳೆಗಾಲದ ವೇಳೆ ಪ್ರಯಾಣಿಕರ ಪರದಾಟವೆಷ್ಟೋ? ಹಾಗೂ ಸರಿಯಾದ ಸಮಯಕ್ಕೆ ಬಾರದ ಬಸ್ಸಿಗಾಗಿ ಕಾಯ್ದು ನಿರಾಸೆಗೊಂಡು ಮರಳುವ ಪ್ರಯಾಣಿಕರೆಷ್ಟೋ? ಇದು ಪ್ರತಿನಿತ್ಯದ ಗೋಳಾಗಿ ಹೋಗಿದೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಇನ್ನೂ ರಸ್ತೆಗಳ ಕಥೆಯನ್ನ ಹೇಳುವುದಾದರೆ ಸಿರಸಿ – ಕುಮುಟಾ ಮಾರ್ಗದ ರಸ್ತೆ ಹಾಳಾಗಿ ಗುಂಡಿ ಬಿದ್ದು, ಸುಮಾರು ವರ್ಷಗಳೇ ಕಳೆದಿವೆ. ಮಳೆಗಾಲ ಬಂತು ಅಂದರೆ ಅದು ರಸ್ತೆಯಾಗಿರುವುದಿಲ್ಲ ಬದಲಿಗೆ ಹೊಳೆಯಾಗಿಬಿಡುತ್ತದೆ. ಇನ್ನೂ ರಸ್ತೆ ಕಾಮಗಾರಿ ಆರಂಭವಾಗಿ ಎರಡು ವರ್ಷಗಳೇ ಕಳೆದರು ಪೂರ್ತಿಗೊಳ್ಳದ ಕಾರಣ ಅಲ್ಲಿನ ಸರ್ಕಾರೀ ಹಾಗೂ ಕೆಲವು ಖಾಸಗಿ ವಾಹನಗಳು ಮೆಲ್ಲನೆ ತಮ್ಮ ಮಾರ್ಗವನ್ನೇ ಬದಲಿಸಿವೆ. ಹಾಗೂ ಉತ್ತರ ಕನ್ನಡ ಜಿಲ್ಲೆಯೊಂದು ಸಂಪೂರ್ಣ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು. ಹಾಗೂ ಜನರ ವಾಸ ಕಡಿಮೆಯಿದ್ದು ಶೇಕಡಾ 70ರಿಂದ 80 ರಷ್ಟು ಅರಣ್ಯ ಪ್ರದೇಶವೇ ಹೆಚ್ಚಾಗಿರುವ ಕಾರಣ ಅಲ್ಲಿನ ಕೆಲ ದೇವಸ್ಥಾನಗಳು ಹಾಗೂ ಒಂಟಿ ಮನೆಗಳ ಬಳಿ ಕಳ್ಳತನ ನಡೆಯುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ ಇದು ಅಲ್ಲಿನ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ದುರಂತದ ಸಂಗತಿ. ಅಥವಾ ಗಮನಕ್ಕೆ ಬಂದಿದ್ದರು ಉತ್ತರ ಕನ್ನಡದ ಜನ ತಾನೇ ಏನು ಮಾಡಿಯಾರು ಎನ್ನುವ ಅಸಡ್ಡೆ ಕೂಡ ಇರಬಹುದೇನೋ.. ಇದಿಷ್ಟು ಕಂಡು ಕಾಣದ ಹಾಗೆ ಇರುವ ಉತ್ತರ ಕನ್ನಡ ಜಿಲ್ಲೆಯ ಮೂಲಭೂತ ಸಮಸ್ಯೆಗಳಾದರೆ, ಇನ್ನೂ ಆಗಾಗ್ಗೆ ತಲೆ ಎತ್ತಿಕೊಳ್ಳುವ ಅಲ್ಲಿನ ನದಿಗಳ ಮೇಲಿನ ಅಭಿವೃದ್ಧಿ ಎಂಬ ನಾಮಫಲಕ ಹೊತ್ತು ಬರುವ ದುಷ್ಟರ ಕೆಂಗಣ್ಣು.
ಪಶ್ಚಿಮ ಘಟ್ಟಗಳ ನದಿಗಳಾದ ಹಾಗೂ ಕೈಗಾರಿಕಾ ಕಸದಿಂದ ದೂರವುಳಿದು ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿಯೂ ಶುದ್ಧತೆಯನ್ನು ಉಳಿಸಿಕೊಂಡಿರುವ ಶರಾವತಿ ಹಾಗೂ ಅಘನಾಶಿನಿ ಈ ಎರಡು ನದಿಗಳು ಉತ್ತರ ಕನ್ನಡ ಜಿಲ್ಲೆಯ ಜಿವನಾಡಿಗಳಾಗಿವೆ. ಈ ನದಿಗಳನ್ನು ಎದೆಗಪ್ಪಿಕೊಂಡು ಬದುಕುವ ಮೀನುಗಾರರಿಗೆ, ಅಡಿಕೆ ಬೆಳೆಗಾರರಿಗೆ, ಹಾಗೂ ಇನ್ನಿತರ ಕೃಷಿ ಚಟುವಟಿಗಳಲ್ಲಿ ತೊಡಗಿಸಿಕೊಂಡವರಿಗೆ.. ಇವು ಕೇವಲ ನದಿಯಲ್ಲ. ಅದೊಂದು ಭಾವನಾತ್ಮಕವಾದ ಸಂಬಂಧ. ಶ್ರೀರಾಮನ ಬಾಣದಿಂದ ಹುಟ್ಟಿದ ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಹುಟ್ಟಿ ಜೋಗದಲ್ಲಿ ಇಳಿದು ಗೇರುಸೊಪ್ಪ ಮಾರ್ಗವಾಗಿ ಅರಬ್ಬೀ ಸಮುದ್ರವನ್ನು ಸೇರುವ ಶರಾವತಿಯು ಸಾಗರ, ಜೋಗ, ಹೆನ್ನಿ ಸಿದ್ದಾಪುರ, ಹೊನ್ನಾವರ ಭಾಗದ ಜನರ ಜೊತೆಗೆ ಅಲ್ಲಿನ ಕಾಡು ಪ್ರಾಣಿಗಳು, ಜಲಚರಜೀವಿಗಳನ್ನು ಸಲಹುವ ಮಹಾತಾಯಿಯಾಗಿ ಕಾಣಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲ ಇಡೀ ಕರ್ನಾಟಕಕ್ಕೆ ವಿದ್ಯುತ್ ಬೆಳಗು ನೀಡುವ ಪಾಲಿನಲ್ಲಿಯೂ ಇವಳು ಹೃದಯವಂತೆ. ಆದರೆ ಈಗ ಈ ಜೀವದಾತೆಗೆ ದೊಡ್ಡ ಗಂಡಾAತರವೊAದು ಬಂದು ನಿಂತಿದೆ. ಹೌದು “ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ” ಏನಿದು ? ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಂದ್ರೆ.., ಈಗಿರುವ ವಿದ್ಯುತ್ ಉತ್ಪಾದನೆಯನ್ನು ಹೊರತುಪಡಿಸಿ ಎರಡು ಸಾವಿರ ಮೆಗಾ ವ್ಯಾಟ್ ಜಲ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವುದು. ಕೇಳುವುದಕ್ಕೆ ಇದೊಂದು ಅಭಿವೃದ್ಧಿಯ ಯೋಜನೆ ಎನಿಸಿಕೊಂಡರು, (ಇದರ ಹಿಂದೆ ಅಡಗಿದೆ ಒಂದು ದೊಡ್ಡ ನಾಶ.) ಯಾಕೆಂದರೆ ಈ ಯೋಜನೆಯನ್ನು ಜಾರಿಗೊಳಿಸುವಿದಕ್ಕೆ ದಟ್ಟವಾದ ಅರಣ್ಯದಲ್ಲಿ ಕಾಮಗಾರಿ ನಡೆಸಬೇಕಾದ ಕಾರಣ ಸುಮಾರು 20 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತೆ, ಮರಗಳ ನಾಶದಿಂದಾಗಿ ಮಣ್ಣಿನ ಸವಕಳಿಯುಂಟಾಗುತ್ತದೆ, ಅಲ್ಲಿನ ಜಲಚರ ಜೀವಿಗಳ ವಾಸಕ್ಕೆ ತೊಂದರೆಯಾಗುತ್ತದೆ. ಇದೆಲ್ಲ ಒಂದುಕಡೆಯಾದರೆ ಮೇಲ್ನೋಟಕ್ಕೆ ಕಾಣಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಹಿಂದಿನ ಉದ್ದೇಶವೇ ಬೇರೆ. ಹೌದು, ಶರಾವತಿ ನದಿಯ ನೀರನ್ನ 500 ರಿಂದ 600 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿಗೆ ತರುವ ಹುನ್ನಾರವೇ ಈ ಯೋಜನೆ. ಶರಾವತಿ ಪಂಪ್ಡ್ ಸ್ಟೋರೇಜ್ ಎಂಬ ಮುಖವಾಡ ಹೊತ್ತು ಬಂದ ಈ ಯೋಜನೆ ಉತ್ತರ ಕನ್ನಡದ ರೈತರಿಗೆ, ಅಲ್ಲಿನ ಜೀವರಾಶಿಗಳಿಗೆ ಮಣ್ಣು ತಿನ್ನಿಸಿ ಬೆಂಗಳೂರಿನ ಹೈ-ಫೈ ಜನರಿಗೆ ನೀರನ್ನ ಒದಗಿಸುವ ಹುನ್ನಾರ. ಒಂದುವೇಳೆ ಶರಾವತಿಯ ಹರಿವು ಬೆಂಗಳೂರು ಮಾರ್ಗದ ಕಡೆಗೆ ಇದ್ದಿದ್ದರೆ ಬಹುಶಃ ಈ ಯೋಜನೆಗೆ ಒಂದು ಅರ್ಥವಿರುತ್ತಿತ್ತೇನೋ ಆದರೆ ತದ್ವಿರುದ್ಧವಾಗಿ ಹರಿಯುವ ನದಿಯನ್ನು ತಮ್ಮ ಅನುಕೂಲಕ್ಕೆ ತಿರುಗಿಸುವುದು ಮನುಷ್ಯನ ಕೆಟ್ಟ ದುರಾಸೆಯನ್ನು ಎತ್ತಿ ತೋರಿಸುತ್ತದೆ. ಯಾಕೆಂದರೆ ಬೆಂಗಳೂರಿನಲ್ಲಿರುವ ಎಷ್ಟೋ ನೈಸರ್ಗಿಕದತ್ತವಾಗಿ ಇದ್ದಂತ ಕೆರೆಗಳನ್ನ ಮುಚ್ಚಿ ಅವೈಜ್ಞಾನಿಕವಾಗಿ ಕಟ್ಟಡಗಳ ನಿರ್ಮಾಣಮಾಡಿ ಸ್ವಚ್ಛವಾಗಿ ಹರಿಯುವ ನದಿಗಳಿಗೆ ಕಾರ್ಖಾನೆಯ ಮಾಲಿನ್ಯವನ್ನು ಹಾಕಿ ಅವುಗಳ ಅವನತಿ ಮಾಡಿ., ಪವಿತ್ರವಾಗಿದ್ದ ವೃಷಭಾವತಿಯನ್ನ ಕೆಂಗೇರಿ ಮೋರಿ ಮಾಡಿದ ಬೆಂಗಳೂರಿನ ವ್ಯವಸ್ಥೆಗೆ 500 ಕಿ.ಮೀ ದೂರದ ಶರಾವತಿ ಬೇಕಾಯಿತೇ..?
ಇದು ಶರಾವತಿಯ ಕಥೆಯಾದರೆ ಇನ್ನು ಸಿರಸಿ, ಸಿದ್ದಾಪುರ, ಕುಮುಟಾ, ಮತ್ತು ಹೊನ್ನಾವರ ಮಾರ್ಗವಾಗಿ ಅರಬ್ಭಿಸಮುದ್ರ ಸೇರುವ ಅಘನಾಶಿನಿಯ ನದಿಯ ಮೇಲು ಸರ್ಕಾರದ ಕಣ್ಣು ಬಿದ್ದಿದ್ದು ಅದು ಕೂಡ ಸಂಕಷ್ಟಕ್ಕೆ ಸಿಲುಕಿದೆ. ಈ ಅಘನಾಶಿನಿ ನದಿಯ ನೀರನ್ನು 200 ರಿಂದ 250 ಕಿ.ಮೀ ದೂರದ ಚಿತ್ರದುರ್ಗಕ್ಕೆ ಹರಿಸುವ ಪ್ರಸ್ತಾವನೆಯನ್ನು ಸರ್ಕಾರ ಕೈಗೊಳ್ಳಲು ಮುಂದಾಗಿದೆ. ಅದುವೇ “ಅಘನಾಶಿನಿ ವೇದಾವತಿ ನದಿ ಜೋಡಣೆ”.
ಈ ಯೋಜನೆಗಳು ಯಶಸ್ವಿಯಾದರೆ ಎಂತಹ ಭಯಾನಕ ಪರಿಣಾಮಗಳು ಉಂಟಾಗುತ್ತವೆ ಗೊತ್ತಾ? ನದಿಯ ಹರಿವು ಕಡಿಮೆಯಾದರೆ ಕೃಷಿ ನಾಶವಾಗುತ್ತದೆ. ಅಲ್ಲಿನ ಮುಖ್ಯ ಬೆಳೆಯಾಗಿ ಕಾಣಿಸಿಕೊಳ್ಳುವ ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತದೆ. ನದಿಯನ್ನ ವಿರುದ್ಧ ದಿಕ್ಕಿಗೆ ಹರಿಸುವುದರಿಂದಾಗಿ ಸಿಹಿ ನೀರು ಕಡಿಮೆಯಾಗಿ ಸಮುದ್ರದದ ಉಪುö್ಪ ನೀರು ನದಿಗೆ ನುಗ್ಗುವುದರಿಂದ ಮುಖಜ ಭೂಮಿಯ ಸೂಕ್ಷ್ಮ ಪರಿಸರ ನಾಶವಾಗುತ್ತದೆ. ಇನ್ನು ಈ ಯೋಜನೆ ವೇಳೆಯಲ್ಲಿ ಎಷ್ಟೋ ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ. ಅಲ್ಲಿನ ಪ್ರಾಣಿ ಪಕ್ಷಿಗಳ ವಾಸಕ್ಕೆ ತೊಂದರೆಯಾಗುತ್ತದೆ. ಹಾಗೂ ಕಾಡಿನ ಕ್ರೂರ ಪ್ರಾಣಿಗಳು ಊರಿನ ಕಡೆ ಪಲಾಯನ ಮಾಡುತ್ತವೆ. ಆಗ ಅಲ್ಲಿನ ಜನರ ವಾಸಕ್ಕೆ ತೊಂದರೆಯಾಗುತ್ತದೆ. ಹೀಗೆ ಒಂದಕೊAದು ಕೊಂಡಿಯಂತಿರುವ ಪ್ರಕೃತಿಯ ಕೊಂಡಿ ಕಳಚಿಕೊಳ್ಳುತ್ತದೆ.ನಮ್ಮ “ಅರಣ್ಯ ಇಲಾಖೆ” ಹಾಗೂ “ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ” ಕಾಡಿನ ರಕ್ಷಣೆ ಮಾಡುವುದರಲ್ಲಿ ತುಂಬಾನೇ ಕಟ್ಟುನಿಟ್ಟಾಗಿವೆ. ಅರಣ್ಯ ಪ್ರದೇಶದಲ್ಲಿ ವಾಸಿಸುವ ರೈತನೊಬ್ಬ ಕೃಷಿ ಭೂಮಿಯ ಅಭಿವೃದ್ದಿಗಾಗಿ ಒಂದು ಹಿಡಿ ಮಣ್ಣು ತೆಗೆದರೆ ಅಥವಾ ಒಂದು ಮರ ಕಡಿದರೆ ಅದನ್ನ ಅರಣ್ಯ ನಾಶದ ಕೇಸ್‌ನಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಶರಾವತಿ ಹಾಗೂ ಅಘನಾಶಿನಿಯಂತಹ ಯೋಜನೆಗಳಿಂದ ಸಾವಿರ ಸಂಖ್ಯೆಯಯಲ್ಲಿ ಮರಗಳ ನಾಶವಾದರೆ ಮಾತ್ರ ಈ ಎರಡು ಇಲಾಖೆಗೆ ಅದು ಪರಿಸರ ನಾಶ, ಅರಣ್ಯ ನಾಶವಾಗಿ ಕಾಣಿಸಿಕೊಳ್ಳುವುದಿಲ್ಲ. ಯಾಕೆಂದರೆ ಇಂತಹ ಯೋಜನೆಗಳಿಗೆ ಕೋಟಿಗಟ್ಟಲೆ ಅನುದಾನ ಸರ್ಕಾರದಿಂದಲೇ ಬಂದಿರುತ್ತದೆ. ಈ ಭಾರಿ ಈ ಎರಡು ಯೋಜನೆಗಳು ಜಾರಿಯಾಗುತ್ತದೆ ಎಂದು ಸುದ್ದಿಯಾದಾಗ ಇಡೀ ಉತ್ತರ ಕನ್ನಡವೇ ಇದರ ವಿರುದ್ಧ ಧ್ವನಿ ಎತ್ತಿತ್ತು. ವಿದ್ಯಾರ್ಥಿಗಳು, ಸಂಘಸAಸ್ಥೆಗಳು, ಅಲ್ಲಿನ ರೈತರು ಸೋಷಿಯಲ್ ಮೀಡಿಯಾದವರು, ಪತ್ರಕರ್ತರು ಒಟ್ಟಾರೆಯಾಗಿ ಎಲ್ಲರು ಸೇರಿ ಈ ಯೋಜನೆಗಳನ್ನು ವಿರೋಧಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸಂಸ್ಥೆಯು ಸದ್ಯಕ್ಕೆ ಈ ಯೋಜನೆಯನ್ನು ಕೈ ಬಿಟ್ಟಿದೆ.
ಆದರೆ ಇದು ಶಾಶ್ವತವಲ್ಲ. ಈ ಯೋಜನೆಯ ರೂಪದ ಮಾರಿ ಯಾವಾಗ ಬೇಕಾದರೂ ಮರಳಿ ಬರಹಹುದು. ನಮಗೆ ಕಾಡುವ ಪ್ರಶೆಯೊಂದೇ ಸರ್ಕಾರಕ್ಕೆ ಬೇಕಾದ ಯೋಜನೆ ಮಾಡುವುದಾದರೆ, ಅವರಿಗೆ ಅನುಕೂಲವಾಗುವುದಾದರೆ, ಸರ್ಕಾರದ ಬೊಕ್ಕಸದಲ್ಲಿ ಕೋಟಿ ಕೋಟಿ ಹಣವಿರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಅನಿವಾರ್ಯವಾಗಿ ಬೇಕೇ ಕೇಕಾಗಿರುವ ಆಸ್ಪತ್ರೆ, ರಸ್ತೆ ಶಾಲಾ-ಕಾಲೇಜುಗಳಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮಾತ್ರ ಸರ್ಕಾರದ ಖಜಾನೆಯಲ್ಲಿ ಹಣವಿರುವುದಿಲ್ಲ. ನಾವು ಪ್ರಭುದ್ದತೆಯಿಂದ ಯೋಚಿಸಿದರೆ ಕೆಲವು ವಿಚಾರಗಳು ಪ್ರಶ್ನೆಯಾಗಿ ಕಾಡುತ್ತವೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮೂಲಕ ಅರಣ್ಯ ನಾಶ ಮಾಡಿ ಪ್ರಾಣಿ ಪಕ್ಷಿಗಳಿಗೆ ತೊಂದರೆಯನ್ನುಂಟು ಮಾಡಿ, ಅಲ್ಲಿನ ರೈತರ ಜೀವನಕ್ಕೆ ಕುತ್ತು ತಂದು ವಿದ್ಯುತ್ ಉತ್ಪಾದನೆ ಮಾಡುವ ಬದಲು ಬಯಲು ಪ್ರದೇಶದಲ್ಲಿ ಪವನ ಶಕ್ತಿಯ ಮೂಲಕ ವಿದ್ಯುತ ಉತ್ಪಾದನೆ ಮಾಡಬಹುದಲ್ಲವೇ..? ಇನ್ನು ಅಘನಾಶಿನಿಯನ್ನ ಚಿತ್ರದುರ್ಗಕ್ಕೆ ಹಾಗೂ ಶರಾವತಿಯನ್ನು ಬೆಂಗಳೂರಿಗೆ ತರುವ ಬದಲು ಅದೇ ಕೋಟಿ ಅನುದಾನದಲ್ಲಿ ಅಲ್ಲಿನ ನದಿ ಕೆರೆಗಳನ್ನೇ ಸ್ವಚ್ಛಗೊಳಿಸಿ ಪುನರುತ್ಥಾನಗೊಳಿಸಬಹುದಲ್ಲವೇ? ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿಯನ್ನ ಸೇರುವ ಕಾವೇರಿ ನದಿ ನಿಸರ್ಗದತ್ತವಾಗಿ ತಮಿಳುನಾಡಿನ ಕಡೆಗೆ ಹರಿಯುತ್ತಿದ್ದರೂ ಕೂಡ ಅದನ್ನ ಕರ್ನಾಟಕದಿಂದ ತಮಿಳುನಾಡಿಗೆ ಹರಿಯ ಬಿಡಲು ಸರ್ಕಾರ ಮೀನಾ-ಮೇಷ ಏಣಿಸುತ್ತದೆ. ಈ ಕಾವೇರಿಗಾಗಿ ಎಷ್ಟೋ ಯುದ್ಧಗಳೇ ನಡೆದು ಹೋಗಿವೆ. ಇಂದಿಗೂ ಕಾವೇರಿ ವಿವಾದ ನಿಂತೇ ಇಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಬ್ಬೀ ಸಮುದ್ರಕ್ಕೆ ಹರಿಯುವ ನದಿಯನ್ನ ಅಲ್ಲಿನ ಜೀವರಾಶಿಗಳಿಗೆ ತೊಂದರೆಯಾದರೂ ಸರಿಯೇ ಹಿಮ್ಮುಖವಾಗಿ ಹರಿಸುವುದು, ಸರಿ ಎನ್ನುವುದಾದರೆ, ಅದೇ ದಿಕ್ಕಿಗೆ ಹರಿಯುವ ನದಿಯಾದ ಕಾವೇರಿಯನ್ನು ಕೂಡ ತಮಿಳುನಾಡಿಗೆ ಹರಿ ಬಿಡುವುದು ಸರಿಯಾದ ವಿಚಾರವೇ ಅಲ್ಲವೇ..! ಇಲ್ಲಿ ನಾವು ಅಭಿವೃದ್ಧಿಯ ವಿರುದ್ಧವಾಗಿ ಮಾತನಾಡುತ್ತಿಲ್ಲ. ಆದರೆ ಒಂದು ಪ್ರದೇಶದ ಅಭಿವೃದ್ದಿಗಾಗಿ ಇನ್ನೊಂದು ಪ್ರದೇಶವನ್ನ ನಾಶಮಾಡುವುದು ಎಷ್ಟರ ಮಟ್ಟಿಗೆ ಸರಿ..? ಅದು ಹೇಗೆ ಅಬಿವೃದ್ದಿ ಎನಿಸಿಕೊಳ್ಳುತ್ತದೆ..?
ಉತ್ತರ ಕನ್ನಡ ಜಿಲ್ಲೆ ಪ್ರಸಿದ್ದಿ ಹೊಂದದೆ ಇರಬಹುದು ಆದರೆ ಅದಕ್ಕೆ ತನ್ನದೇ ಆದ ಇತಿಹಾಸವಿದೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಕೊಡುಗೆ ಕೊಟ್ಟ ನಿದರ್ಶನಗಳಿವೆ. ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ ಬರೋಬ್ಬರಿ ಎಪ್ಪತ್ತು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಜಿಲ್ಲೆ ಇದು. ಭಾರತವನ್ನು ಕಬಳಿಸಬೇಕೆಂದು ಸಮುದ್ರ ಮಾರ್ಗದ ಮೂಲಕ ಹೊಂಚು ಹಾಕುತಿದ್ದ ಫ್ರೆಂಚರು, ಪೋರ್ಚುಗೀಸರಿಗೆ ನಡುಕ ಹುಟ್ಟಿಸಿ ಅವರಿಂದಲೇ ಸುಂಕ ವಸೂಲಿ ಮಾಡಿ ಕಾಳು ಮೆಣಸಿನ ವ್ಯಾಪಾರವನ್ನು ಅಂತಾರಾಷ್ಟಿçÃಯ ಮಟ್ಟಕ್ಕೆ ಕೊಂಡೊಯ್ದು ಹೊನ್ನ ಬೊಕ್ಕಸದಿಂದ ಶ್ರೀಮಂತ ಜಿಲ್ಲೆಯಾಗಿ ಮಾಡಿದ ಆ ರಾಣಿಯ ಆಳ್ವಿಕೆಯೆಲ್ಲಿ..? ಈಗಿನ ಅವಿದ್ಯಾವಂತ ರಾಜಕೀಯವೆಲ್ಲಿ?, ವಿದೇಶಿಯರ ನುಸುಳುವಿಕೆಯಿಂದ ಅಲ್ಲಿನ ಕೃಷಿ ಭೂಮಿ, ಅರಣ್ಯ ಸಂಪತ್ತು ಹಾಗೂ ಕನ್ನಡದ ಸಂಪ್ರದಾಯವನ್ನು ಉಳಿಸಿಕೊಳ್ಳುವಲ್ಲಿ ರಾಣಿ ಚೆನ್ನಭೈರಾದೇವಿಯ ಕೊಡುಗೆ ಅಪಾರವಾದದ್ದು. ಯಾವೊಬ್ಬ ಪುರುಷ ರಾಜನು ಕರ್ನಾಟಕದಲ್ಲಿ ಎಪ್ಪತ್ತು ವರ್ಷಗಳ ಆಳ್ವಿಕೆ ಮಾಡಲಿಲ್ಲ ಆದರೆ ರಾಣಿ ಹೆಣ್ಣಾಗಿದ್ದುಕೊಂಡು ಇಡೀ ಜೀವನವನ್ನೇ ತನ್ನ ದೇಶಕ್ಕಾಗಿ ಮುಡಿಪಿಟ್ಟು ಕೊನೆಗೂ ತನ್ನವರಿಂದಲೇ ಕಾರಾಗೃಹ ಸೇರಿದ್ದಳು. ಸಾವಿರಾರು ದಶಕಗಳಿಂದಲೂ ವಿದೇಶಿಯರ ನುಸುಳುವಿಕೆಯಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಿರುವ ಉತ್ತರ ಕನ್ನಡವೀಗ ಉತ್ತರವಿಲ್ಲದ ಪ್ರಶೆಯಾಗಿ ಉಳಿದಿದೆ, ನಿಜವಾದ ಅಭಿವೃದ್ದಿಯಿಂದ ದೂರವಿರುವ ಎಲ್ಲವು ಇದ್ದೂ, ಏನೂ ಇಲ್ಲದೆ, ಉತ್ತರವಿಲ್ಲದ ಉತ್ತರ ಕನ್ನಡವಾಗಿ ಉಳಿದಿರುವುದು ವಿಷಾದಕರ ಸಂಗತಿಯಾಗಿದೆ.
ಪ್ರಕೃತಿ ನಾಶದಂತಹ ಅಭಿವೃದ್ಧಿಗಳು ನಮಗೆ ಬೇಡ, ಒಂದು ಪ್ರದೇಶಕ್ಕೆ ಅನ್ಯಾಯ ಮಾಡಿ ಇನ್ನೊಂದು ಪ್ರದೇಶವನ್ನು ಉದ್ದಾರ ಮಾಡುವ ರಾಜಕೀಯ ನಮಗೆ ಬೇಡ. ನಮಗೆ ಬೇಕಿರುವುದು ಪ್ರಕೃತಿಯನ್ನ ಬಳಸಿಕೊಂಡು ಬದುಕುವುದಲ್ಲ ಬದಲಿಗೆ ಪ್ರಕೃತಿಯೊಂದಿಗೆ ಬದುಕುವುದು.



