ಹಿಂದೋಳದ ಸಾಮಜವರಗಮನಾ

ಕೃಪೆ: ಸದ್ಯೋಜಾತ ಭಟ್
ಸುಮಾರು ಸಾವಿರದೊಂಬೈನೂರ ಎಪ್ಪತ್ತೊಂಬತ್ತನೇ ಇಸವಿ ಇರಬಹುದು. ಆಧುನಿಕ ಯುಗದ ಜೀವನ ಶೈಲಿಯ ಭರಾಟೆಯ ಆರಂಭದ ದಿನ ಅದು. ಅಂದರೆ ಹಿಪ್ಪಿ ಸಂಸ್ಕೃತಿಯು ಆರ೦ಭವಾಗಿ ಕೆಲವೇ ಸಮಯ ಕಳೆದಿತ್ತು. ಪಾಪ್ ಸಂಗೀತದ ಭಾರಾಟೆಯಲ್ಲಿ ಭಾರತೀಯ ಶುದ್ಧ ಶಾಸ್ತ್ರೀಯ ಸಂಗೀತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ವಾತಾವರಣ. ಒಟ್ಟಾರೆಯಾಗಿ ಶಾಸ್ತ್ರೀಯ ಸಂಗೀತ ಕೋಮ ಸ್ಥಿತಿಯಲ್ಲಿತ್ತು ಅನ್ನಬಹುದು. ಜನಮಾನಸದಿಂದ ಹಿಂದೆ ಸರಿದು ಪಾಪ ಸಂಗೀತ ಮೇಳೈಸಿದ ಕಾಲವದು. ರಾಕ್-ಪಾಪ್ ಕ್ರೇಝ್ ನ ಹೊಸ ಅಲೆಯಲ್ಲಿ ಯುವಕರು ತಲ್ಲೀನರಾಗಿರುತ್ತಿದ್ದರು. ಕರ್ನಾಟಕ ಸ೦ಗೀತದ ಕ್ಲಿಷ್ಟ ಸ್ವರ ಮತ್ತು ರಾಗಗಳ ನೋಟುಗಳೆಲ್ಲ ಹಳೆತನವನ್ನು ಪಡೆದುಕೊಂಡಾಗಿತ್ತು. ಘನ ಸ೦ಗೀತ ವಿದ್ವಾ೦ಸರುಗಳನ್ನೆಲ್ಲ ದಿನ ಯುವ ಜನಾಂಗ ಹಾಸ್ಯ ಮಾಡಿ, ಹಾಸ್ಯಗಾರರಂತೆ ನೋಡುತ್ತಿದ್ದ ಕಾಲ. ದೊಡ್ದ ದೊಡ್ದ ಸಂಗೀತ ಕಚೇರಿಗಳಿಗೆಲ್ಲ ಜನ ಸೇರುವುದು ದುಸ್ತರವಾಗಿತ್ತು. ಸಂಗೀತಾಸಕ್ತರಿಗೇ ನಿರಾಸಕ್ತಿಯ ಗ್ರಹಣ ಕವಿದ ಕಾಲ.
ಹೌದು ಇದೇ ಕಾಲ ಗ್ರಹಣದ ಪರದೆ ಸರಿಸಿದ ಕಾಲ. ಜನರಲ್ಲಿ ಅಂದರೆ ಸಾಮಾನ್ಯರಲ್ಲಿಯೂ ಹುಚ್ಚೆಬ್ಬಿಸಿದ ಚಿತ್ರವೊಂದು ತೆರೆಕಂಡಿತು. ಇದು ಶುದ್ಧ ಶಾಸ್ತ್ರೀಯ ಮತ್ತು ಸ೦ಗೀತಮಯ ಭಾರತೀಯ ಗುರು ಶಿಷ್ಯ ಪರ೦ಪರೆಯಿಂದ ಬಂದದ್ದು. ಸಾಮಾನ್ಯವಾಗಿ ತೆಲುಗಿನ ಹೆಚ್ಚಿನ ಚಲನಚಿತ್ರಗಳು ಮೊದಲಿನಿ೦ದಲೂ ನಾಯಕನಟನ ಪಾತ್ರವೇ ಪ್ರಾಧಾನ್ಯ ಹೊಂದಿದ ಚಿತ್ರಗಳು ಬರುತ್ತಿದ್ದವು. ಸುಮಾರು 2 ಗಂಟೆ 33 ನಿಮಿಷಗಳ ಚಲನ ಚಿತ್ರವೊಂದು ಹೈದ್ರಾಬಾದಿನ ಒ೦ದೇ ಒ೦ದು ಚಿತ್ರಮ೦ದಿರದಲ್ಲಿ ತೆರೆ ಕ೦ಡಿತು. ಚಿತ್ರಮಂದಿರದಲ್ಲಿ ಒಂದೇ ಒಂದು ಜನವಿಲ್ಲ. ಮೊದಲದಿನದ ಸ್ವಾಗತವೇ ಹಾಗಿತ್ತು. ಈಗಿನಂತೆ ಸಾಮಾಜಿಕ ಜಾಲತಾಣಗಳು, ವಾಟ್ಸಪ್, ಇಂಟರ್ನೆಟ್, ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಯಾವುದೂ ಇರಲಿಲ್ಲ. ಪ್ರಚಾರಕ್ಕೆ ಟಿ ವಿ ಮಾಧ್ಯಮವೂ ಇರಲಿಲ್ಲ. ಚಲನ ಚಿತ್ರಗಳೆಲ್ಲಾ ಒಬ್ಬರ ಬಾಯಿ೦ದ ಇನ್ನೊಬ್ಬರಿಗೆ ತಿಳಿದು ಪ್ರಚಾರ ಪಡೆಯಬೇಕಿದ್ದ ಕಾಲ. ದರೆ ಜನರಲ್ಲಿ ಅತೀ ಬೇಗನೇ ಹುಚ್ಚೆಬ್ಬಿಸಿದ ಚಿತ್ರವೊಂದು ಕಾಲಿ ಕುರ್ಚಿಗಳಿಂದ ಆರಂಭವಾಗಿದ್ದು ವಿಶೇಷವಾಗಿತ್ತು. ದಿನಕಳೆದ೦ತೆ ಈ ಚಿತ್ರ ಎಷ್ಟು ಜನಜನಿತವಾಯ್ತೆ೦ದರೆ ಇಡೀ ದಕ್ಷಿಣ ಭಾರತದ ಉದ್ದಗಲಕ್ಕೂ ಹೆಚ್ಚಿನ ಸಂಗೀತ ಶಾಲೆಗಳಲ್ಲಿ ಸಂಗೀತಾಭಿಮಾನಿ ವಿದ್ಯಾರ್ಥಿಗಳ ಸೇರ್ಪಡೆಗಳಾಗಿ ಭರ್ತಿಯಾಗಿ ಹೋಗಿದ್ದವು!
ಪಾಶ್ಚಿಮಾತ್ಯ ಸಂಗೀತದ ಹುಚ್ಚು ಹತ್ತಿಸಿಕೊಂಡಿದ್ದ ಕಾಲೇಜು ವಿದ್ಯಾರ್ಥಿಗಳೂ ಸಹ ಸರಳವರಸೆ ಜಂಟಿವರಸೆ ಕಲಿಯಲಾರಂಭಿಸಿದ್ದರು. ಭಾಷೆ ಬಾರದ ಆಗಷ್ಟೇ ಅಲ್ಲೋ ಇಲ್ಲೋ ಕಣ್ಣು ಬಿಡುತ್ತಿದ್ದ ಗಾಯಕರೆಲ್ಲ “ಮಾನಸ ಸ೦ಚರರೇ ಬ್ರಹ್ಮನಿ” ಹಾಡಿ ದೊಡ್ದ ಸಂಗೀತಗಾರರಾಗಿ ಹೋದರು. ಮಲಯಾಳ೦ ಮತ್ತು ತಮಿಳು ಭಾಷೆಗೆ ಚಿತ್ರ ಡಬ್ ಆದರೂ ಸಹ ಸಂಭಾಷಣೆಯನ್ನಷ್ಟೇ ಡಬ್ ಮಾಡಿ ಚಿತ್ರದ ಹಾಡುಗಳನ್ನೆಲ್ಲ ಮೂಲಭಾಷೆಯಲ್ಲೇ ಇರಿಸಿಕೊ೦ಡವು. ಆ ಹಾಡುಗಳನ್ನು ಕೇಳಲೆಂದೇ ಜನ ಚಿತ್ರಮಂದಿರದ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದರು. ಚಿತ್ರದ ಪ್ರತಿಯೊಂದು ಹಾಡೂ ಸಹ ಅಷ್ಟು ಪ್ರಸಿದ್ಧಿ ಪಡೆದವು. ಜನಮಾನಸ ಅದನ್ನು ಅತ್ಯಂತ ಆಪ್ತತೆಯಿಂದ ಸ್ವೀಕರಿಸಿ ಬಿಟ್ಟಿತು.
ಹೌದು ಅದು ಬೇರೆ ಯಾವ ಚಿತ್ರವೂ ಅಲ್ಲ. ಅದು ‘ಶ೦ಕರಾಭರಣಂ’. ಅಂದಿನಿಂದ ಇ೦ದಿಗೂ ಭಾರತೀಯ ಚಿತ್ರರ೦ಗದ ಇತಿಹಾಸ ‘ಶ೦ಕರಾಭರಣಂ’ನ ಉಲ್ಲೇಖವಿಲ್ಲದೇ ಪರಿಪೂರ್ಣವಾಗುವುದಿಲ್ಲ. ಶಾಸ್ತ್ರೀಯ ಸ೦ಗೀತದ ಸ್ವರ ರಾಗ ತಾನಗಳ ಔನ್ನತ್ಯವನ್ನೂ, ಗುರು ಶಿಷ್ಯರ ನಡುವಿನ ದೈವಿಕ ಸ೦ಬ೦ಧವನ್ನೂ ಎತ್ತಿಹಿಡಿದು ಸನಾತನ ಸ೦ಸ್ಕೃತಿಯ ಕೀರ್ತಿ ಪತಾಕೆಯನ್ನು ಭಾರತೀಯ ಚಿತ್ರರ೦ಗದಲ್ಲಿ ಹಾರಿಸಿದ ಅಮೂಲ್ಯ ರತ್ನ.
ಆಂಧ್ರದ ವಿಶಾಖಪಟ್ಟಣಂನ ಡೆಪ್ಯುಟಿ ಕಲೆಕ್ಟರ್ ಆಗಿ, ತೆಲುಗು ಸಂಸ್ಕೃತಿ ಇಲಾಖೆಯಲ್ಲಿ IAS ಅಧಿಕಾರಿಯಾಗಿ ಕೆಲಸ ಮಾಡಿದ್ದ ಶ್ರೀ ಜೆ.ವಿ. ಸೋಮಯಾಜುಲು ಮೊದಲ ಬಾರಿ ಶ೦ಕರಾಭರಣಂ ಚಿತ್ರದಲ್ಲಿ ಶ೦ಕರಶಾಸ್ತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಮತ್ತು ಅವರು ಅಷ್ಟೇ ಬೇಗ ಪ್ರಸಿದ್ಧರಾದರು.
ಜೆ.ವಿ. ಸೋಮಯಾಜುಲು ಈ “ಶಂಕರಾಭರಣಂ” ಎನ್ನುವ ಒ೦ದೇ ಒ೦ದು ಚಲನಚಿತ್ರದಿ೦ದ ಆಂಧ್ರದ ಉತ್ತರಭಾಗದ ಸಾ೦ಸ್ಕೃತಿಕ ರಾಯಭಾರಿಯೆ೦ದೇ ಹೆಸರಾಗಿಹೋದರು. ಮು೦ದಿನ ಕೆಲವು ವರ್ಷಗಳ ಕಾಲ ಅವರು ಮುಟ್ಟಿದ್ದೆಲ್ಲ ಚಿನ್ನ. ’ತ್ಯಾಗಯ್ಯ’, ವಿಶ್ವನಾಥರ ’ಸಪ್ತಪದಿ’, ಜ೦ಧ್ಯಾಲರ ’ನೆಲವ೦ಕ’, ವ೦ಶಿಯ ’ಸಿತಾರ’ ಹೀಗೆ ಅನೇಕ ಪ್ರಸಿದ್ಧ ಚಲನ ಚಿತ್ರಗಳಗಳಲ್ಲೆಲ್ಲ ಸೋಮಯಾಜುಲು ಅಭಿನಯಿಸಿದರು. ಸತತ 45 ವರ್ಷಗಳ ಕಾಲ ಪ್ರದರ್ಶನ ಕ೦ಡ ತೆಲುಗಿನ ಇತಿಹಾಸದಲ್ಲೇ ಅತಿದೊಡ್ಡ ಪ್ರಸಿದ್ಧ ನಾಟಕ ’ಕನ್ಯಾಶುಲ್ಕಂ’ನ ರಾಮಪ೦ತುಲು ಪಾತ್ರ ತೆಲುಗು ರ೦ಗಭೂಮಿಯ ಇತಿಹಾಸ ನಿರ್ಮಿಸಿತ್ತು. ಇದರ ಕಥೆ ಏನೂ ಅಸಾಮಾನ್ಯವಲ್ಲ. ಕರ್ನಾಟಕ ಸ೦ಗೀತ ಕ್ಷೇತ್ರದ ಸಾಮ್ರಾಟ ಅನ್ನಿಸಿಕೊ೦ಡ ಶ೦ಕರಶಾಸ್ತ್ರಿ ಹಾಗೂ ಅವರ ಸ೦ಗೀತವನ್ನಾರಾಧಿಸುವ ವೈಶ್ಯೆಯೊಬ್ಬಳ ನಡುವಿನ ಗುರು ಶಿಷ್ಯ ಸ೦ಬ೦ಧದ ಸುತ್ತ ಇಡಿ ಚಿತ್ರದ ಕಥೆ ಸುತ್ತುತ್ತದೆ. ಈ ಚಲನ ಚಿತ್ರದಲ್ಲೊಂದು ಗಾಢವಾದ ರೂಪಕವಿದೆ. ವಿಷವನ್ನು ಒಡಲಲ್ಲಿ ಹೊತ್ತು ಲೋಕದಿ೦ದ ವಿಷಕಾರಕನೆನೆಸಿ ಶಿವನ ಶರಣು ಹೋಗಿ ಶ೦ಕರಾಭರಣನೆನಿಸಿದವನು ವಾಸುಕಿ. ಅ೦ತೆಯೇ ಅತ್ಯಾಚಾರಕ್ಕೊಳಗಾಗಿ ತನ್ನೊಡಲಲ್ಲಿ ಮಗುವನ್ನು ಹೊತ್ತು ಜನರಿ೦ದ ತ್ಯಜಿಸಲ್ಪಟ್ಟು ಶ೦ಕರಶಾಸ್ತ್ರಿಗಳ ಶರಣು ಹೋಗಿ ಶ೦ಕರಾಭರಣವೆನೆಸಿಕೊ೦ಡಿದ್ದು ತುಳಸಿ ಎ೦ಬ ವೈಶ್ಯೆ. ಆವರಿಬ್ಬರ ಗುರು-ಶಿಷ್ಯರ ಪಾತ್ರದಲ್ಲಿ ಸೋಮಯಾಜುಲು ಮ೦ಜುಭಾರ್ಗವಿಯನ್ನು ಹೊರತುಪಡಿಸಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.
ಈ ಚಿತ್ರದ ನ೦ತರ ತೆಲುಗಿನಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಸ೦ಗೀತ ಪ್ರಧಾನ ಕಲಾತ್ಮಕ ಚಿತ್ರಗಳ ಹೊಸ ಪರ೦ಪರೆಯೇ ಆರಂಭವಾಗಿ ಹೋಯ್ತು. ದಾಸರಿ ನಾರಾಯಣ ರಾಯರ “ಮೇಘಸ೦ದೇಶ”ದಿ೦ದ ಹಿಡಿದು ಮಲಯಾಳ೦ನ ಮೋಹನಲಾಲ್ ಅಭಿನಯದ “ಭರತಂ”, ಹಿ೦ದಿಯ “ಸುರ್ ಸಂಗಮ್”ನವರೆಗೆ ಶ೦ಕರಾಭರಣಂ ಛಾಯೆಯ ಚಿತ್ರಗಳು ತಯಾರಾದವು. ಭಾರತೀಯ ಸ೦ಸ್ಕೃತಿ, ಸ೦ಪ್ರದಾಯ, ಸ೦ಗೀತಗಳ ಚು೦ಗು ಹಿಡಿದು ತಯಾರಾದ ವಿಶ್ವನಾಥ ಅವರ “ಸಾಗರ ಸಂಗಮಂ”, “ ಸ್ವಾತಿಮುತ್ಯಂ”, “ಸಪ್ತಪದಿ”, “ಶ್ರುತಿಲಯಲು”, ಸ್ವರ್ಣಕಮಲಂನಂಥ ಚಿತ್ರಗಳೆಲ್ಲ ತೆಲುಗಿನಲ್ಲಿ ಪ್ರಸಿದ್ಧಿ ಹೊಂದಿ ಹಣಗಳಿಸಿದವು. ಶ೦ಕರಾಭರಣಂ ನಲ್ಲಿ ಶ೦ಕರಶಾಸ್ತ್ರಿಗಳು ಮೈಸೂರು ವಾಸುದೇವಾಚಾರ್ಯರ ಪ್ರಸಿದ್ಧ ಕೃತಿ “ಬ್ರೋಚೇವಾರೆವರುರಾ” ದ ಅರ್ಥವಾಗಲೀ ಭಾವವಾಗಲೀ ಗೊತ್ತಿಲ್ಲದೆ ವಿಚಿತ್ರವಾಗಿ ಹಾಡುತ್ತಿದ್ದ ವಿದ್ವತ್ತಿಲ್ಲದ ಸ೦ಗೀತಗಾರ ದಾಸುವಿಗೆ ಹೇಳುವ ಒ೦ದು ಸಂಭಾಷಣೆ ಇದೆ. “ಈ ಕೀರ್ತನೆಯ ಒಂದೊಂದು ಅಕ್ಷರವೂ ಆರ್ದ್ರಭಾವದಲ್ಲಿ ಅದ್ದಿ ತೆಗೆದಿರುವಂಥದು. ಭಗವಂತನ ಆಸರೆಯ ಬಾಯಾರಿಕೆಯಿಂದ ಬಳಲಿ ಬೆಂಡಾದ ಭಕ್ತನ ಎದೆಯಾಳದಲ್ಲಿ ತನ್ನಿಂತಾನೇ ಗಂಗಾ ಜಲವಾಗಿ ಹೊರಹೊಮ್ಮಿದ ಗೀತೆಯದು, ರಾಗವದು. ಅಮೃತದಂಥ ಆ ಸಂಗೀತವನ್ನು ಅಪಭ್ರಂಶ ಮಾಡಬೇಡ.” ಈಗಿನ ಸ೦ಗೀತ ನಿರ್ದೇಶಕರ ಕಪಾಳಕ್ಕೆ ಹೊಡೆಯುವ೦ಥಹ ಸಂಭಾಷಣೆ ಅದು. ಈ ಸಂಭಾಷಣೆಯೊಂದೇ ಸಾಕು ಶಾಸ್ತ್ರೀಯ ಸ೦ಗೀತದ ಹಿರಿಮೆಯನ್ನು ವರ್ಣಿಸಲಿಕ್ಕೆ.
ತ್ಯಾಗರಾಜರು ತಮ್ಮ ಕಾಲದಲ್ಲಿ ಇನ್ನೂ ಹೆಚ್ಚು ಬಳಕೆಯಲ್ಲಿಲ್ಲದ “೨೨ನೇ ಮೇಳಕರ್ತ ರಾಗವಾದ ಖರಹರಪ್ರಿಯ”, “೨೮ನೇ ಮೇಳಕರ್ತ ರಾಗವಾದ ಹರಿಕಾಂಭೋಜಿ ೫ನೆಯ ಬಾಣ ಚಕ್ರದ ನಾಲ್ಕನೆಯ ರಾಗ. ಚತುಶ್ರುತಿ ರಿಷಭ, ಅಂತರಗಾಂಧಾರ, ಶುದ್ಧ ಮಧ್ಯಮ, ಚತುಶ್ರುತಿ ದೈವತ ಮತ್ತು ಕೈಶಿಕೀ ನಿಷಾದವು ಈ ರಾಗದ ಸ್ವರಸ್ಥಾನಗಳು ಎನ್ನಿಸಿಕೊಳ್ಳುತ್ತವೆ. ಇಂತಹ ಹರಿಕಾಂಭೋಜಿ,”, “೩೪ನೇ ಮೇಳಕರ್ತ ೬ನೇ ಚಕ್ರದ ನಾಲ್ಕನೆಯ ರಾಗವಾದ ವಾಗಧೀಶ್ವರಿ” ಮೊದಲಾದ ಮೇಳಕರ್ತ ರಾಗಗಳಲ್ಲಿ ರಚನೆಗಳನ್ನು ಮಾಡಿ ಅವುಗಳನ್ನು ಪ್ರಚಲಿತಕ್ಕೆ ತಂದರೋ, ಹಾಗೆಯೇ ವಾಸುದೇವಾಚಾರ್ಯರು ತ್ಯಾಗರಾಜರು ಕೈಹಾಕದಿದ್ದ “೧೦ನೇ ದಿಶಿ ಚಕ್ರದ ೩ನೇ ಮೇಳ. ಅಂದರೆ ೫೭ನೆಯ ಮೇಳಕರ್ತರಾಗ ಸಿಂಹೇಂದ್ರಮಧ್ಯಮ”, “ಧರ್ಮವತಿ”, “ಹತ್ತನೇ ಮೇಳಕರ್ತ ರಾಗವಾದ ನಾಟಕಪ್ರಿಯ”, “೬೨ನೇ ಮೇಳಕರ್ತರಾಗವಾದ ಇದಕ್ಕೆ ರತಿಪ್ರಿಯ ಎನ್ನುವ ಹೆಸರಿದ್ದರೂ ಈಗ ಅದನ್ನು ರಿಷಭಪ್ರಿಯಎನ್ನಲಾಗುತ್ತದೆ”, “ಖಮಾಸ್” ನಂತಹ ಮೇಳರಾಗಗಳಲ್ಲಿ ರಚನೆಗಳನ್ನು ಮಾಡಿ ಪ್ರಚಲಿತಕ್ಕೆ ತ೦ದವರು. ’ಬ್ರೋಚೇವಾರೆವರುರಾ’ ಎನ್ನುವ ಈ ಕೃತಿ ಖಮಾಸ್ ರಾಗದಲ್ಲಿದೆ.
ಇದೇ ಚಿತ್ರದಲ್ಲಿ ಇನ್ನೊ೦ದು ಹಾಡಿದೆ. ತ್ಯಾಗರಾಜರು ರಚಿಸಿದ “ಸಾಮಜವರಗಮನ” ಇದು ಭಾರತೀಯ ಚಿತ್ರರ೦ಗದಲ್ಲಿ ಬ೦ದಿರುವ ಹಿಂದೋಳ ರಾಗದ ಅತ್ಯಂತ ಹೆಚ್ಚು ಜನಪ್ರಿಯ ಕೃತಿ ಎನ್ನುವುದು ನಿಃಸಂಶಯ. ಇದು ಜನಸಾಮಾನ್ಯರನ್ನು ತಲುಪಿದ್ದು ‘ಶಂಕರಾಭರಣಂ’ ಸಿನೆಮಾದಲ್ಲಿ ಅಳವಡಿಸಿಕೊಂಡಿದ್ದರಿಂದಲೇ ಎಂದರೆ ಅದು ತಪ್ಪಾಗಲಿಕ್ಕಿಲ್ಲ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ರಾತ್ರಿ ರಾಗಗಳಲ್ಲಿ ಅತ್ಯ೦ತ ಜನಪ್ರಿಯ ರಾಗ “ಮಾಲಕಂಸ್”. ಇದು ಭಕ್ತಿಪ್ರಧಾನ ಮತ್ತು ಗಂಭೀರ ರಸ ಪ್ರಧಾನವಾದದ್ದು. ಇದೇ ಸ್ವರ ಪ್ರಸ್ಥಾನಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ “ಹಿಂದೋಳ” ಎಂದೂ ಕರೆಯುತ್ತಾರೆ. ಇದು ೨೦ನೆಯ ಮೇಳಕರ್ತ ನಠಭೈರವಿಯ ಜನ್ಯ ರಾಗ. ಇಲ್ಲಿ ಈ ಚಲನಚಿತ್ರದಲ್ಲಿ ಎಸ್. ಜಾನಕಿ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂರವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕಾರ್ಯಕ್ರಮವನ್ನು “ಮಧ್ಯಮಾವತಿ” ರಾಗದ ಕೀರ್ತನೆಯೊಂದಿಗೆ, ಅಥವಾ ಕೊನೇ ಪಕ್ಷ ಆ ರಚನೆ ಬೇರೆ ರಾಗದಲ್ಲಿದ್ದರೂ ಕೊನೆಯ ಚರಣವನ್ನು ಮಧ್ಯಮಾವತಿಯಲ್ಲಿ ಹಾಡಿಯೇ ಮುಗಿಸಬೇಕು ಎನ್ನುವ ನಿಯಮ ಇದೆ. ಅಂದರೆ ಸಂಗೀತ ಕಛೇರಿಗೆ ಮಂಗಲವೀಯುವ ರಾಗ “ಮಧ್ಯಮಾವತಿ”. ಇದು ೨೨ನೇ ಮೇಳಕರ್ತ ಖರಹರಪ್ರಿಯ ರಾಗದ ಜನ್ಯರಾಗ. ಇದು ಸಾಮಾನ್ಯವಾಗಿ ಸಾವಿರಾರು ವರ್ಷಗಳಿಂದ ಮಧ್ಯಮಾದಿ ಎನ್ನುವ ಹೆಸರಿನಿಂದ ರೂಢಿಯಲ್ಲಿತ್ತು. ಮೊದಲಿದು ಮಧ್ಯಮಗ್ರಾಮ ರಾಗವಾಗಿತ್ತು. ಈ ರಾಗವು ಮಧ್ಯಮ ಗ್ರಾಮಜನ್ಯವಾಗಿದ್ದು, ಶೃಂಗಾರ ರಸದ ವಿನಿಯೋಗಕ್ಕೆ ಮತ್ತು ವೀಣಾವಾದಕರು ಮತ್ತು ಕೊಳಲು ನುಡಿಸುವವರು ಮಧ್ಯಮಾದಿಯನ್ನು ಮೊದಲು ಪ್ರಯೋಗಿಸಿ ನಂತರ ಇತರ ರಾಗಗಳನ್ನು ನುಡಿಸುತ್ತಿದ್ದರು ಎನ್ನುವುದಾಗಿ ಜಗದೇಕಮಲ್ಲನ ಸಂಗೀತಚೂಡಾಮಣಿಯಿಂದ ತಿಳಿದು ಬರುತ್ತದೆ. ೧೬ -೧೭ನೇ ಶತಮಾನದಲ್ಲಿ ಇದು ಔಡವರಾಗವಾಗಿ ಕಂಡುಬಂದು ೨೨ನೇ ಮೇಳಕರ್ತ ರಾಗಕ್ಕೆ ಸೇರಿದ ಜನ್ಯವಾಗಿ ಈಗಿನ ಸ್ವರೂಪ ಪಡೆದುಕೊಂಡಿದೆ. ಇದು ಮಧ್ಯಮಾವತಿ ಎಮ್ದು ಆಗಿದ್ದು ಮುದ್ದುವೆಂಕಟಮುಖಿಯ ಕಾಲಕ್ಕೆ. ಸಂಗೀತಕಛೇರಿಯ ವೇಳೆ ಯಾವುದೇ ತಪ್ಪು ಸ್ವರಾಲಾಪನೆ ಆಗಿದ್ದರೆ, ಅಪಸ್ವರ ಮೂಡಿದ್ದರೆ, ತಾಳ ತಪ್ಪಿದ್ದರೆ ಮಧ್ಯಮಾವತಿ ರಾಗ ಹಾಡಿದರೆ ಗಾನದೇವತೆ ಮನ್ನಿಸುತ್ತಾಳೆ೦ಬ ನ೦ಬಿಕೆಯಿದೆ. ಈ ಚಿತ್ರದ “ಶಂಕರಾ ನಾದಶರೀರಾಪರಾ” ಎನ್ನುವ ಕೃತಿ ಇದೇ ರಾಗದಲ್ಲಿದೆ.
2004ರಲ್ಲಿ ಶ್ರೀ ಸೋಮಯಾಜಲು ನಿಧನರಾಗುತ್ತಾರೆ. ಅಭಿನವ ತ್ಯಾಗರಾಜರ ಮಹಾ ಪ್ರಸ್ಥಾನವಾಗುತ್ತದೆ.



