ಮಾಟ ಮಂತ್ರದ ಹೆಸರಲ್ಲಿ ಜನಗಳಿಗೆ ವಂಚಿಸುತ್ತಿದ್ದ ಬೇತಮಂಗಲದ ಬೇತಾಳ ಪೋಲೀಸರ ವಶಕ್ಕೆ!


ಬೇತಮಂಗಲ (ಕೋಲಾರ): ಮಾಟ, ಮಂತ್ರ, ದೆವ್ವ, ಬೇತಾಳ ಹೆಸರಲ್ಲಿ ಅಮಾಯಕರಿಗೆ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಸ್ವಯಂ ಘೋಷಿತ ನಕಲಿ ಚಂದ್ರನಾಥ್ ಅಘೋರಿ ಎಂಬಾತನನ್ನು ಕೆಜಿಎಫ್ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಆತನ ಸ್ವಯಂ ಘೋಷಿತ ಬೇತಾಳ ಶಕ್ತಿ ಪೀಠಕ್ಕೂ ಬೀಗ ಜಡಿದಿದ್ದಾರೆ.
ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಹೋಬಳಿ ಐವಾರಹಳ್ಳಿ ಗ್ರಾಮದ ಚಂದ್ರಪ್ಪ ಎಂಬಾತ ತನ್ನದೇ ಜಮೀನಿನಲ್ಲಿ 108 ಅಡಿ ಎತ್ತರದ ಬೇತಾಳ ಪ್ರತಿಮೆ ಪ್ರತಿಷ್ಠಾಪಿಸಿ, ಭಯದ ವಾತಾವರಣ ಸಿರ್ಮಿಸಿ, ಅಮಾಯಕರ ಬಳಿ ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ. ದೆವ್ವ ಭೂತ ಪಿಶಾಚಿ ಎಂದು ಹೇಳಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಮೂಲಕ ಶೋಷಣೆ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ 4-5 ವರ್ಷಗಳಿಂದ ನಡೆಯುತ್ತಿದ್ದ ಸ್ವಾಮೀಜಿ ಕಳ್ಳಾಟಕ್ಕೆ ಕೊನೆಗೂ ಪೊಲೀಸರು ಬ್ರೇಕ್ ಹಾಕಿದ್ದಾರೆ. ಮೌಡ್ಯಾಚಾರ ನಿಷೇಧ ಮಧ್ಯೆಯೂ ಸ್ವಯಂಘೋಷಿತ ಅಘೋರಿ ಚಂದ್ರನಾಥ್ ಮತ್ತು ಅವನು ಸಾಕುತ್ತಿದ್ದ ಹತ್ತಾರು ಮಂದಿ ಶಿಷ್ಯ ಸ್ವಾಮೀಜಿಗಳನ್ನು ಸಹ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಖಚಿತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಘೋರಿ ಚಂದ್ರನಾಥ್ ಹಾಗೂ ಅನುಚರರನ್ನು ವಶಕ್ಕೆ ಪಡೆದು ಕಾನೂನು ಪ್ರಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ತಿಳಿಸಿದ್ದಾರೆ.



