ಕ್ರೈಮ್

ತಾಯಿಯನ್ನೇ ಬಡಿದು ಕೊಂದ ಮಗಳು, ಮೊಮ್ಮಗ!

ರಾಜಧಾನಿ ಬೆಂಗಳೂರಿನ ಕೆಂಗೇರಿಯಲ್ಲಿ ಸೋಮವಾರ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮದ್ಯ ಸೇವಿಸಲು ಆಕ್ಷೇಪ ವ್ಯಕ್ತಪಡಿಸಿದ 70 ವರ್ಷದ ಹೆತ್ತ ತಾಯಿಯನ್ನು ಆಕೆಯ ಮಗಳು ಮತ್ತು ಮೊಮ್ಮಗ ದೊಣ್ಣೆಯಿಂದ ಬಡಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಮೃತೆಯನ್ನು ಜಯಮ್ಮ ಎಂದು ಗುರುತಿಸಲಾಗಿದೆ. ಕೆಂಗೇರಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಸೋಮವಾರ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗ್ಯಲಕ್ಷ್ಮಿ (49) ಮತ್ತು ಕುಶಾಲ್ (26) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಜೂನ್ 22ರ ಬೆಳಗ್ಗೆ ಮದ್ಯ ಸೇವಿಸಬೇಡಿ ಎಂದು ಹೇಳುತ್ತಿದ್ದ ಹಾಗೂ ಆಸ್ತಿ ಮಾರಿಕೊಂಡು ಕುಡಿಯುವುದೇ ನಿಮ್ಮ ಚಾಳಿ ಆಗಿದೆ ಎಂದು ಬೈಯುತ್ತಿದ್ದ ವೃದ್ಧೆಯನ್ನು, ಆಕೆಯ ಮಗಳು ಮತ್ತು ಮೊಮ್ಮಗ ಕ್ರಿಕೆಟ್ ಬ್ಯಾಟ್ ಹಾಗೂ ಮರದ ಕೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಜಯಮ್ಮ ಅವರು ಮನೆಯ ಹಾಲ್ ನ ಸ್ನಾನಗೃಹದ ಸಮೀಪ ಬಿದ್ದಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಾರ್ಟ್ ಮೆಂಟ್ ನಿವಾಸಿ ಧನಂಜಯ್ ನೀಡಿದ ದೂರಿನ ಆಧಾರದ ಮೇಲೆ, ತಾಯಿ ಹಾಗೂ ಮಗನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) (ಕೊಲೆ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾಗ್ಯಲಕ್ಷ್ಮಿ ಮತ್ತು ಕುಶಾಲ್ ಇಬ್ಬರಿಗೂ ಮದ್ಯಪಾನದ ಅಭ್ಯಾಸ ಇತ್ತು. ಜೂನ್ 21ರ ರಾತ್ರಿ ಇದೇ ವಿಚಾರಕ್ಕೆ ಸಂಬಂಧಿಸಿ ತಾಯಿ ಮತ್ತು ಮಗಳ ನಡುವೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾಗ್ಯಲಕ್ಷ್ಮಿ ಜೊತೆ ಮಗ ಕುಶಾಲ್ ಕೂಡ ಸೇರಿಕೊಂಡು ಜಯಮ್ಮ ಅವರ ತಲೆಗೆ ರಾಗಿ ಮುದ್ದೆ ಮಾಡುವ ಕೋಲಿನಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾರೆ. ಬಳಿಕ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಶವವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದರು.

ಸ್ವಲ್ಪ ಸಮಯದ ಬಳಿಕ ಕುಶಾಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ, “ನಮ್ಮ ಅಜ್ಜಿ ಮೃತಪಟ್ಟಿದ್ದಾರೆ, ನನಗೆ ತಲೆ ಸರಿಯಿಲ್ಲ. ಕುಡಿಯಲು ಮದ್ಯ ತೆಗೆದುಕೊಂಡು ಬಾ” ಎಂದು ಹೇಳಿದ್ದಾನೆ. ಸ್ನೇಹಿತ ಮನೆಗೆ ಬಂದಾಗ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

“ಭಾಗ್ಯಲಕ್ಷ್ಮಿ ಮದ್ಯಪಾನ ಮಾಡುತ್ತಿದ್ದ ಕಾರಣ ಪತಿ ಮತ್ತೊಂದು ಮದುವೆಯಾಗಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುಮಾರು ಎರಡು ತಿಂಗಳ ಹಿಂದೆ ಹಾಸನದಿಂದ ಜಯಮ್ಮ ಅವರು ಇವರ ಜೊತೆ ವಾಸಿಸಲು ಬಂದಿದ್ದರು. ಜಯಮ್ಮ ಬಂದ ಬಳಿಕ ಮನೆಯಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಇವರೆಲ್ಲರೂ ಮದ್ಯ ಸೇವಿಸಿ ಜೋರಾಗಿ ಕಿರುಚಾಡುತ್ತಿದ್ದರು ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಆರೋಪಿಗಳಾದ ಭಾಗ್ಯಲಕ್ಷ್ಮಿ ಮತ್ತು ಕುಶಾಲ್ ಅವರನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ” ಎಂದು ಬೆಂಗಳೂರು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker