ಶಿಕ್ಷಕಿಯ ಅವಮಾನ ಬ*ಯಾದ ಮುಗ್ಧ ಜೀವ..!


ಆನೇಕಲ್: ತಪ್ಪು ತಿದ್ದಿ ಸನ್ಮಾರ್ಗ ತೋರಬೇಕಾದ ಶಿಕ್ಷಕಿಯೊಬ್ಬರ ಬೇಜವಾಬ್ದಾರಿ ನಡವಳಿಕೆ ಹಾಗೂ ಸಾರ್ವಜನಿಕ ಅವಮಾನಕ್ಕೆ ಮನನೊಂದ 8ನೇ ತರಗತಿಯ ಮುಗ್ಧ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಅತ್ಯಂತ ಕರುಣಾಜನಕ ಘಟನೆ ಆನೇಕಲ್ ತಾಲೂಕಿನ ಮರಸೂರಿನಲ್ಲಿ ನಡೆದಿದೆ.
‘ನನ್ನ ಅಮ್ಮನನ್ನು ಯಾರೂ ಬೈಯಬೇಡಿ, ಎಲ್ಲರೂ ನನ್ನ ಕ್ಷಮಿಸಿ’ ಎಂದು ಮೂರು ಪುಟಗಳ ಕಣ್ಣೀರಿನ ಡೆತ್ ನೋಟ್ ಬರೆದಿಟ್ಟು, ಶಾಲಾ ವಿದ್ಯಾರ್ಥಿನಿ ಮಧುಶ್ರೀ (14) ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.
ಘಟನೆಯ ಹಿನ್ನೆಲೆ:
ಮರಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಮಧುಶ್ರೀ, ಶಾಲೆಯ ಶಿಕ್ಷಕಿಯೊಬ್ಬರು ಸಹಪಾಠಿಗಳೆದುರು ಮಾಡಿದ ಗಂಭೀರ ಆರೋಪ ಹಾಗೂ ನೀಡಿದ ಮಾನಸಿಕ ಕಿರುಕುಳದಿಂದ ತೀವ್ರವಾಗಿ ನೊಂದಿದ್ದಳು ಎನ್ನಲಾಗಿದೆ. ಬುಧವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ನೇಣಿಗೆ ಶರಣಾಗಿದ್ದು, ಗುರುವಾರ ಬೆಳಿಗ್ಗೆ ಪೋಷಕರು ಎದ್ದು ನೋಡಿದಾಗ ಮಗಳ ಶವ ಪತ್ತೆಯಾಗಿದೆ. ಮಗಳ ಅಕಾಲಿಕ ಮರಣದಿಂದ ಹೆತ್ತ ಕರುಳಿನ ಆಕ್ರಂದನ ಮುಗಿಲು ಮುಟ್ಟಿದೆ.
ಕರಳು ಹಿಂಡುವಂತಿದೆ 3 ಪುಟಗಳ ಡೆತ್ ನೋಟ್!
ಆತ್ಮಹತ್ಯೆಗೂ ಮುನ್ನ ಬಾಲಕಿ ಬರೆದಿಟ್ಟಿರುವ ಮೂರು ಪುಟಗಳ ಡೆತ್ ನೋಟ್‌ನ ಒಂದೊಂದು ಸಾಲುಗಳು ಎಂಥವರ ಕಣ್ಣಲ್ಲೂ ನೀರು ತರಿಸುವಂತಿವೆ.



”ನನಗೆ ಶಾಲೆಯಲ್ಲಿ ನಡೆದ ಘಟನೆ ತುಂಬಾ ನೋವು ತಂದಿದೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ, ಇಂತಹ ಅವಮಾನ ಸಹಿಸಿಕೊಂಡು ಬದುಕಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನನಗೆ ಈ ಭೂಮಿ ಮೇಲೆ ಬದುಕಲು ಅರ್ಹತೆ ಇಲ್ಲ. ಈ ನಿರ್ಧಾರಕ್ಕೆ ಅಮ್ಮ, ಅಕ್ಕ, ತಂಗಿ, ತಮ್ಮ ಯಾರದ್ದೂ ತಪ್ಪಿಲ್ಲ. ನನ್ನ ಅಮ್ಮನನ್ನು ಯಾರೂ ಬೈಯಬೇಡಿ, ಎಲ್ಲರೂ ನನ್ನ ಕ್ಷಮಿಸಿ…” ಎಂದು ಬಾಲಕಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ತನಿಖೆ ಕೈಗೆತ್ತಿಕೊಂಡ ಪೊಲೀಸರು:
ಮಗುವಿನ ಸಾವಿಗೆ ಶಾಲಾ ಶಿಕ್ಷಕಿಯ ನೇರ ನಡವಳಿಕೆಯೇ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಅಸಲಿಗೆ ನಡೆದಿದ್ದೇನು? ಬಾಲಕಿಗೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಅವಮಾನ ಮಾಡಿದ ಆ ಶಿಕ್ಷಕಿ ಯಾರು? ಎಂಬಿತ್ಯಾದಿ ಆಯಾಮಗಳ ಕುರಿತು ಆನೇಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಮಕ್ಕಳಿಗೆ ಮಾರ್ಗದರ್ಶಕರಾಗಬೇಕಾದ ಶಿಕ್ಷಕರೇ ಈ ರೀತಿ ಮಕ್ಕಳ ಸೂಕ್ಷ್ಮ ಮನಸ್ಸಿಗೆ ಆಘಾತ ಉಂಟುಮಾಡುವಂತೆ ನಡೆದುಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಗ್ಧ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಆಕೆಯ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸ್ಥಳೀಯರು ಪ್ರಾರ್ಥಿಸಿದ್ದಾರೆ.



